ಸುಳ್ಳು ಸುದ್ದಿಗಳ ಮಾಯಾ ಜಾಲ... ನಂಬಿ ಮೋಸ ಹೋಗುತ್ತಿರುವ ಮಾಯಾ ಲೋಕ

ಸುಳ್ಳು ಸುದ್ದಿಗಳ ಮಾಯಾ ಜಾಲ...
ನಂಬಿ ಮೋಸ ಹೋಗುತ್ತಿರುವ ಮಾಯಾ ಲೋಕ


(1)
ಸುಳ್ಳು ಸುದ್ದಿ: ಮಂತ್ರಪಠಣದಿಂದ ಸೋಂಕು ನಿವಾರಣೆಯಾಗುತ್ತದೆ ಎಂಬ ಸುದ್ದಿಯೂ ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುತ್ತಿದೆ. ‘ಕೊರೊನಾ ರಕ್ಷಾ ಕವಚ’ದ ಶ್ಲೋಕಗಳ ಪಠಣದ ಧ್ವನಿಮುದ್ರಿಕೆಯೊಂದು ಕೆಲವು ದಿನಗಳಿಂದ ಸದ್ದು ಮಾಡುತ್ತಿದೆ. ಶಿವಪುರಾಣದಲ್ಲಿ ಈ ಶ್ಲೋಕಗಳಿವೆ ಎಂಬ ಮಾಹಿತಿಯನ್ನು ಆ ವಿಡಿಯೊದ ಜತೆ ನೀಡಲಾಗಿದೆ. ‘ಚೀನಾ ದೇಶದಲ್ಲಿ ಹುಟ್ಟಿದ ಕೊರೊನಾ ಎಂಬ ವೈರಸ್‌, ಮಾಂಸಾಹಾರ ಸೇವನೆಯಿಂದಾಗಿ ಪ್ರಪಂಚದ ತುಂಬಾ ಹಬ್ಬುತ್ತಿದೆ. ಈ ವೈರಸ್‌ನಿಂದ ನಮ್ಮನ್ನು ಕಾಪಾಡು ಶಿವನೇ’ ಎನ್ನುವುದು ಶ್ಲೋಕಗಳ ಒಟ್ಟು ತಾತ್ಪರ್ಯವಾಗಿದೆ.


ಸತ್ಯಾಂಶ: ಶಿವಪುರಾಣದಲ್ಲಿ ಇಂತಹ ಶ್ಲೋಕ ಇಲ್ಲವೇ ಇಲ್ಲ ಎಂಬುದನ್ನು ಸಂಸ್ಕೃತ ವಿದ್ವಾಂಸರು ಖಚಿತಪಡಿಸಿದ್ದಾರೆ. ಈಗಿನ ಸಂದರ್ಭಕ್ಕೆ ಅನುಗುಣವಾಗಿ ಕೆಲವರು ಈ ಶ್ಲೋಕಗಳನ್ನು ರಚಿಸಿದ್ದು, ಸಂಕಷ್ಟದಿಂದ ಪಾರು ಮಾಡುವಂತೆ ದೇವರಿಗೆ ಮೊರೆ ಇಡಲಾಗಿದೆ ಅಷ್ಟೆ ಎಂದು ಅವರು ಹೇಳುತ್ತಾರೆ. ಆದರೆ, ಶ್ಲೋಕಗಳ ಪಠಣದಿಂದ ಸೋಂಕು ದೂರವಾಗದು ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ.


(2)
ಸುಳ್ಳು ಸುದ್ದಿ: ಗೋಮೂತ್ರ ಸೇವನೆಯಿಂದ ಕೊರೊನಾವೈರಸ್‌ ದೂರಮಾಡಬಹುದು, ಮನೆಯೊಳಗೆ ಸಗಣಿ ಮೇಲೆ ಲೋಬಾನ ಹಚ್ಚಬೇಕು. ‘ಓಂ ನಮಃ ಶಿವಾಯ’ ಅಥವಾ ಗಾಯತ್ರಿ ಮಂತ್ರವನ್ನು ಪಠಿಸುತ್ತಾ ಮನೆಯ ತುಂಬ ಲೋಬಾನದ ಹೊಗೆ ತುಂಬಿಸಿದರೆ ವೈರಸ್‌ ಸಾಯುತ್ತದೆ. ಪ್ರತಿನಿತ್ಯ ಹೋಮ–ಹವನ ಮಾಡುವುದರಿಂದ ವೈರಸ್‌ ಅನ್ನು ದೂರಮಾಡಬಹುದು ಎಂಬ ಸಂದೇಶವೂ
ವಾಟ್ಸ್‌ ಆ್ಯಪ್‌ನಲ್ಲಿ ಹರಿದಾಡಿದೆ.

ಸತ್ಯಾಂಶ: ಸೋಂಕು ನಿವಾರಕ ಸಿಂಪಡಣೆ ಮಾಡಿದಾಗ ಅದರ ಪ್ರಭಾವ ಇರುವಷ್ಟು ಸಮಯ ಮಾತ್ರ ಸೋಂಕಿನ ಭಯ ಇರಲಾರದು. ಮಿಕ್ಕ ಯಾವ ವಾದಗಳಿಗೂ ಆಧಾರವಿಲ್ಲ. ಅಂತಹ ಮಾಹಿತಿಯನ್ನು ನಂಬಿ ಅಪಾಯ ತಂದುಕೊಳ್ಳಬಾರದು ಎನ್ನುವುದು ವೈದ್ಯಲೋಕದ ಸಲಹೆಯಾಗಿದೆ.

(3)
ಸುಳ್ಳು ಸುದ್ದಿ: ನಾಸ್ಟ್ರಾಡಮಸ್‌ 1551ರಲ್ಲಿಯೇ ಬರೆದಿದ್ದ: ಅವಳಿ ಅಂಕಿಗಳ ವರ್ಷದಲ್ಲಿ (2020), ರಾಣಿಯೊಬ್ಬಳು ಅವತರಿಸಲಿದ್ದು (ಕೊರೊನಾ), ಅವಳು ಪೂರ್ವದಿಂದ ಬರುತ್ತಾಳೆ (ಚೀನಾ) ಮತ್ತು ಪ್ಲೇಗ್‌ (ವೈರಸ್‌) ಹರಡುತ್ತಾಳೆ. ಏಳು ಪರ್ವತಗಳ ದೇಶದಲ್ಲಿ (ಇಟಲಿ) ಕಗ್ಗತ್ತಲು ಕವಿದು, ಆ ಕ್ಷಣದಲ್ಲಿ ಜನ ಮಣ್ಣಾಗುತ್ತಾರೆ (ಸಾವು). ಇದರಿಂದ ಜಗತ್ತು ನಾಶವಾಗಲಿದೆ ಎಂದು. ಜಗತ್ತಿನ ಅರ್ಥವ್ಯವಸ್ಥೆ ನೆಲಕಚ್ಚಿರುವುದು ನಿಮ್ಮ ಕಣ್ಮುಂದೆ ಇದೆಯಲ್ಲವೇ ಎಂಬ ಬರಹ ಎಲ್ಲೆಡೆ ಹರಿದಾಡಿದೆ.

ಸತ್ಯಾಂಶ: ನಾಸ್ಟ್ರಾಡಮಸ್‌ ಕೃತಿಗಳಲ್ಲಿ ಇಂತಹ ಯಾವ ವಾಕ್ಯಗಳೂ ಪತ್ತೆಯಾಗಿಲ್ಲ. ಆತನ ಮೊದಲ ಕೃತಿ ಹೊರಬಂದಿದ್ದೇ 1555ರಲ್ಲಿ. ಆತ ಚೌಪದಿಗಳಲ್ಲಿ ಪದ್ಯಗಳನ್ನು ರಚನೆ ಮಾಡಿದ್ದ. ಆತನ ಬರವಣಿಗೆಗೆ ಈ ವಾಕ್ಯಗಳಲ್ಲಿ ಯಾವುದೇ ಸಾಮ್ಯತೆ ಇಲ್ಲ politiFact ವರದಿ ಮಾಡಿದೆ.
ಫೇಸ್‌ಬುಕ್‌ನಲ್ಲಿ ಬರುತ್ತಿರುವ ಮಾಹಿತಿಯ ಸತ್ಯಾಂಶದ ಪತ್ತೆಗೆ politiFact ಸಂಸ್ಥೆಯು ಫೇಸ್‌ಬುಕ್‌ಗೆ ನೆರವು ನೀಡುತ್ತಿದೆ. ಸಾಮಾಜಿಕ ಜಾಲತಾಣಗಳ ಇತ್ತೀಚಿನ ಪೋಸ್ಟ್‌ಗಳ ಹೊರಗೆ ಈ ಭವಿಷ್ಯವಾಣಿಯ ಬಗ್ಗೆ ಎಲ್ಲಿಯೂ ಉಲ್ಲೇಖವಿಲ್ಲ ಎಂಬುದು ಪರಿಶೀಲನೆಯಲ್ಲಿ ಎದ್ದುಕಂಡಿದೆ. ಯಾವ ಮೂಲದಿಂದ ಈ ಮಾಹಿತಿಯನ್ನು ಪಡೆಯಲಾಯಿತು ಎಂಬುದಕ್ಕೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದೂ ತಿಳಿಸಲಾಗಿದೆ.

(4)
ಸುಳ್ಳು ಸುದ್ದಿ: ಏಪ್ರಿಲ್‌ ಮಧ್ಯಭಾಗದಿಂದ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲು ಸರ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂಬ ಸುದ್ದಿ ಹರಿದಾಡಿದೆ.

ಸತ್ಯಾಂಶ: ತುರ್ತು ಪರಿಸ್ಥಿತಿ ಘೋಷಿಸುವಂತಹ ಯಾವುದೇ ಚಿಂತನೆ ನಡೆದಿಲ್ಲ
ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಕಂಡು ಕಂಡುದನೆಲ್ಲವ ಕೊಂಡು
ಅಟ್ಟಹಾಸದಿ ಮೆರೆವ ಜನಕೆ
ಕಾಣದ ಜೀವಿಯು ಬಂದು
ತಲ್ಲಣಿಸುವುದು ಜಗವು ನೋಡಾ
ಗುಹೇಶ್ವರ

ಅಲ್ಲಮಪ್ರಭುಗಳು ಕೊರೊನಾವೈರಸ್‌ನ ಭವಿಷ್ಯ ನುಡಿದಿದ್ದರು ಎಂದು ಅವರ ವಚನವೊಂದು ಹರಿದಾಡುತ್ತಿದೆ

(5)
ಸುಳ್ಳು ಸುದ್ದಿ: ‘ಅತ್ರಿಣಾ ತ್ವಾ ಕ್ರಿಮೇ ಹನ್ಮಿ ಕಣ್ವೇನ ಜಮದಗ್ನಿನಾ...’ ಎಂಬ ಶ್ಲೋಕವೊಂದು ಹರಿದಾಡಿತ್ತು. ಈ ಶ್ಲೋಕವನ್ನು ಹೇಳಿದರೆ ಅದು ಎಬ್ಬಿಸುವ ತರಂಗಗಳಿಂದ ಕೊರೊನಾ ವೈರಸ್‌ನ ಪ್ರಭಾವ ತಗ್ಗಿ ಕೆಲವೇ ಕ್ಷಣಗಳಲ್ಲಿ ಅದು ನಿಷ್ಕ್ರಿಯವಾಗುತ್ತದೆ ಎಂದು ಹೇಳಲಾಗಿತ್ತು.

ಸತ್ಯಾಂಶ: ಇಂತಹ ಸುಳ್ಳು ಮಾಹಿತಿಯನ್ನು ಹರಿಬಿಡಬೇಡಿ ಎಂದು ನೆಟ್ಟಿಗರು ಶ್ಲೋಕ ಹಾಕಿದವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಹಾಗೊಂದು ವೇಳೆ ವೈರಸ್‌ ನಿಷ್ಕ್ರಿಯವಾಗುವುದೇ ನಿಜವಾದರೆ ಸೋಂಕುಪೀಡಿತರ ಬಳಿ ಕುಳಿತು ಪಠಿಸಿ ಎಂದು ಸಲಹೆಯನ್ನೂ ನೀಡಿದ್ದರು. ಬಳಿಕ ಈ ವಿಡಿಯೊ ನೇಪಥ್ಯಕ್ಕೆ ಸರಿದಿತ್ತು.

(6)
ಸುಳ್ಳು ಸುದ್ದಿ: ಮುಸ್ಲಿಂ ಸಮುದಾಯದ ಹಣ್ಣಿನ ವ್ಯಾಪಾರಿಯೊಬ್ಬರು, ಕೈಗಾಡಿ ಮೇಲೆ ಹಣ್ಣುಗಳನ್ನು ಜೋಡಿಸುವಾಗ ಬೆರಳಿನಿಂದ ಎಂಜಲು ಸವರಿಕೊಳ್ಳುವ ವಿಡಿಯೊ ವೈರಲ್ ಆಗಿದೆ.


ಸತ್ಯಾಂಶ: ಆ ಹಣ್ಣಿನ ವ್ಯಾಪಾರಿಯ ವಿಡಿಯೊವನ್ನು ಫೆಬ್ರುವರಿ ಎರಡನೇ ವಾರದಲ್ಲಿ ಚಿತ್ರೀಕರಿಸಲಾಗಿದೆ. ಹಣ್ಣಿಗೆ ಎಂಜಲು ಸವರುವ ಸಂಬಂಧ ಆತನ ಮೇಲೆ ಪ್ರಕರಣವೂ ದಾಖಲಾಗಿದ್ದು, ಪೊಲೀಸರು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ಆತನನ್ನು ಕೊರೊನಾವೈರಸ್ ತಪಾಸಣೆಗೂ ಕಳುಹಿಸಲಾಗಿದೆ. ಆ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿಲ್ಲ ಎಂಬುದು ದೃಢಪಟ್ಟಿದೆ.

(7)
ಸುಳ್ಳು ಸುದ್ದಿ: ಮಧ್ಯಪ್ರದೇಶದ ರೇವಾ ಜಿಲ್ಲೆಯ ಅರ್ಚಕರೊಬ್ಬರಿಗೆ ದೇವಾಲಯದ ಎದುರೇ ಪೊಲೀಸ್ ಸಿಬ್ಬಂದಿಯೊಬ್ಬರು ಲಾಠಿಯಿಂದ ಹೊಡೆಯುತ್ತಿರುವ ಚಿತ್ರ ವೈರಲ್ ಆಗಿದೆ. ಪೊಲೀಸ್ ಸಿಬ್ಬಂದಿ ಮುಸ್ಲಿಂ, ಆತನ ಹೆಸರು ಅಬೀದ್ ಖಾನ್, ಆತ ರೇವಾ ಎಸ್‌.ಪಿ. ಎಂಬ ಸುದ್ದಿ ಹರಿದಾಡುತ್ತಿದೆ.

ಸತ್ಯಾಂಶ: ವಿಡಿಯೊದಲ್ಲಿರುವ ಮಾಹಿತಿ ಸುಳ್ಳು ಎಂದು ರೇವಾ ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಲಾಕ್‌ಡೌನ್‌ ಹೊರತಾಗಿಯೂ ಅರ್ಚಕ ತನ್ನ ದೇವಾಲಯದ ಆವರಣದಲ್ಲಿ ಸಭೆ ನಡೆಸಲು ಅವಕಾಶ ನೀಡಿದ್ದ. ಇದನ್ನು ಪ್ರಶ್ನಿಸಿದ್ದ ಪೊಲೀಸರ ಮೇಲೆ ಕೂಗಾಡಿದ್ದ. ಆಗ ಪೊಲೀಸರು ಬಲಪ್ರಯೋಗಿಸಿದ್ದರು. ಅರ್ಚಕನ ಮೇಲೆ ಹಲ್ಲೆ ನಡೆಸಿದ ಸಿಬ್ಬಂದಿಯು ಇನ್‌ಸ್ಪೆಕ್ಟರ್‌ ಆಗಿದ್ದು, ಆತನ ಹೆಸು ರಾಜಕುಮಾರ್ ಮಿಶ್ರಾ ಎಂದು ಪೊಲೀಸರು ತಿಳಿಸಿದ್ದಾರೆ.

(8)
ಸುಳ್ಳು ಸುದ್ದಿ: ದೆಹಲಿಯ ನಿಜಾಮುದ್ದೀನ್‌ ದರ್ಗಾದ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಮುಸ್ಲಿಂ ವ್ಯಕ್ತಿಯೊಬ್ಬ ಊಟದ ಪಾರ್ಸಲ್‌ನಲ್ಲಿ ಉಗುಳುವ ದೃಶ್ಯವುಳ್ಳ ವಿಡಿಯೊ ಎಲ್ಲೆಡೆ ಹರಿದಾಡಿದೆ. ಹಾಗೆಯೇ ಮುಸ್ಲಿಮರು ಸಾಮೂಹಿಕವಾಗಿ ಸೀನುತ್ತಿರುವ ವಿಡಿಯೊ ಕೂಡ ಹರಿದಾಡಿದೆ.

ಸತ್ಯಾಂಶ: ಊಟದಲ್ಲಿ ವ್ಯಕ್ತಿ ಉಗುಳುವ ವಿಡಿಯೊ ಭಾರತದ್ದಲ್ಲ. 2019ರ ಏಪ್ರಿಲ್ 27ರಂದು ಯೂಟ್ಯೂಬ್‌ನಲ್ಲಿ ಇದನ್ನು ಪ್ರಕಟಿಸಲಾಗಿತ್ತು. ಚೀನಾದಲ್ಲಿ ಕೊರೊನಾ ಬಂದಿದ್ದೇ 2019ರ ನವೆಂಬರ್‌ನಲ್ಲಿ. ಸೀನುವ ದೃಶ್ಯವಿರುವ ವಿಡಿಯೊ ಪಾಕಿಸ್ತಾನದ್ದು. ವಾಸ್ತವವಾಗಿ ಅವರು ಸೀನುತ್ತಿಲ್ಲ. ಬದಲಾಗಿ ಜೋರಾಗಿ ಉಸಿರಾಡುತ್ತಿರುವ ನೋಟವದು. ಇದೊಂದು ಸೂಫಿ ಆಚರಣೆ. ಇದರ ಹೆಸರು 'ಜಿಕ್ರ್'. ಈ ವಿಡಿಯೊದಲ್ಲಿರುವುದು ನಿಜಾಮುದ್ದೀನ್ ದರ್ಗಾ ಅಲ್ಲ.

(9)
ಸುಳ್ಳು ಸುದ್ದಿ: ದೆಹಲಿಯ ನಿಜಾಮುದ್ದೀನ್‌ ದರ್ಗಾದ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಮುಸ್ಲಿಮರು ತಟ್ಟೆ ಮತ್ತು ಚಮಚ ನೆಕ್ಕುತ್ತಿರುವ ವಿಡಿಯೊ

ಸತ್ಯಾಂಶ: ಈ ವಿಡಿಯೊ ಭಾರತದ್ದು ಹಾಗೂ ಮೊದಲು ಪ್ರಕಟವಾಗಿದ್ದು 2018ರ ಜುಲೈ 30 2018ರಂದು. ದಾವೂದಿ ಬೋಹ್ರಾ ಪಂಗಡದವರಲ್ಲಿ ಒಂದು ಅಗಳು ಆಹಾರವನ್ನೂ ಬಿಡದೇ ನೆಕ್ಕುವ ಸಂಪ್ರದಾಯವಿದೆ. ಈ ವಿಡಿಯೊಗೂ ನಿಜಾಮುದ್ದೀನ್ ಮಸೀದಿಗೂ ಸಂಬಂಧವಿಲ್ಲ.

Featured Post

ನಿದ್ದೆ ಎಂಬ ಮದ್ದು

ನಿದ್ದೆ ಎಂಬ ಮದ್ದು ‘ಹಗಲು ಎಚ್ಚರ, ರಾತ್ರಿ ಗಡದ್ದಾಗಿ ನಿದ್ದೆ ಮಾಡಿದರೆ ಕೊರೊನಾ ಸದ್ದಿರೋಲ್ವಂತೆ’ ಸುದ್ದಿಸಾರ ಹೇಳಿದೆ. ‘ಹಾಳಾದ್ದು, ಮಧ್ಯಾಹ್ನ ನಿದ್ದೆ ತಡೆಯ...

Popular Post