ನೋಡಿ ಸ್ವಾಮಿ ಮಾಲ್ಗುಡಿಯ ಆ ದಿನಗಳು
ಮಂಜುನಾಥ್ ನಾಯ್ಕರ್
ನೀವು ಮಾಲ್ಗುಡಿ ಡೇಸ್ ನೋಡಿದ್ದೀರಾದರೆ ನನ್ನ ಪರಿಚಯ ಇದ್ದೇ ಇರುತ್ತದೆ. ಹೌದು, ನಾನು ಮಾಸ್ಟರ್ ಮಂಜುನಾಥ್. ಆ ಕಾಲದ ಬಾಲ ಕಲಾವಿದ. ನನ್ನ ಮೂರನೇ ವರ್ಷದಲ್ಲಿ ಚಿತ್ರರಂಗದ ಜತೆ ನಂಟು ಶುರುವಾಯಿತು. ಪ್ರೊಡಕ್ಷನ್ ಮ್ಯಾನೇಜರ್ ಆಗಿದ್ದ ನನ್ನ ತಂದೆಯ ಸ್ನೇಹಿತರೊಬ್ಬರು ವಾಚಾಳಿ ಹುಡುಗನ ಪಾತ್ರಕ್ಕಾಗಿ ಹುಡುಕಾಟದಲ್ಲಿದ್ದರು. ನನಗದು ಅನಾಯಾಸವಾಗಿ ಒಲಿದು ಬಂತು. ಮಾಲ್ಗುಡಿ ಡೇಸ್‌ನ ಸ್ವಾಮಿ ಪಾತ್ರ ಹಾಗೂ ಅಗ್ನಿಪಥ್‌ನ ಅಮಿತಾಭ್ ಬಚ್ಚನ್ ಅವರ ಬಾಲ್ಯದ ಪಾತ್ರ ಮಾಡುವ ಹೊತ್ತಿಗಾಗಲೇ ನಾನು 23 ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದೆ.
ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಸರಣಿ ಚಿತ್ರಗಳನ್ನು ತಯಾರಿಸಲು ನಿರ್ಧರಿಸಲಾಗಿತ್ತು. ಆಗ ಇದ್ದಿದ್ದು ದೂರದರ್ಶನ ಮಾತ್ರ. ದಕ್ಷಿಣ ಭಾರತದ ತಂಡಕ್ಕೆ ರಾಷ್ಟ್ರೀಯ ಸರಣಿಯೊಂದನ್ನು ನೀಡುವುದು ಹೇಗೆಂಬ ಅಳುಕೂ ಅವರಲ್ಲಿತ್ತು. ಆರ್.ಕೆ. ನಾರಾಯಣ್ ಹಾಗೂ ಶಂಕರ್‌ನಾಗ್ ಮೊದಲಾದವರ ನಿರಂತರ ಪರಿಶ್ರಮದ ಫಲವಾಗಿ ಕನ್ನಡಿಗರೇ ಕೂಡಿದ್ದ ತಂಡ ಇಡೀ ಸರಣಿಯಲ್ಲಿ ಕೆಲಸ ಮಾಡಿತು.
ಅದು 1987ರ ಬೇಸಿಗೆ ಸಮಯ. ನೂರಕ್ಕೂ ಹೆಚ್ಚು ಕಲಾವಿದರು ಹಾಗೂ ತಂತ್ರಜ್ಞರಿದ್ದ ನಮ್ಮ ತಂಡ ಆಗುಂಬೆಯಲ್ಲಿ ಬೀಡುಬಿಟ್ಟಿತ್ತು. ಊರಿನ ಜನರಿಗಿಂತ ನಮ್ಮ ತಂಡದ ಸಂಖ್ಯೆಯೇ ಹೆಚ್ಚಿತ್ತು. ಆ ಊರು ಅಕ್ಷರಶಃ ನನ್ನ ಮನೆಯೇ ಆಗಿಹೋಗಿತ್ತು. ಬೆಳಗ್ಗೆ 5ಕ್ಕೆ ಎದ್ದು, ಅಂಬಾಸಿಡರ್ ಕಾರು ಏರಿ, 70 ಕಿಲೋಮೀಟರ್ ದೂರದಲ್ಲಿದ್ದ ಅರಸಾಳು ರೈಲ್ವೆ ನಿಲ್ದಾಣ ತಲುಪಬೇಕಿತ್ತು. ಅಲ್ಲಿಗೆ ಬರುತ್ತಿದ್ದುದು ಎರಡು ರೈಲು ಮಾತ್ರ. ಇಂತಹ ಪರಿಸ್ಥಿತಿಯಲ್ಲಿ ಚಿತ್ರೀಕರಣ ದುಸ್ತರವೇ ಸರಿ.
ಅಸಾಧಾರಣ ದೂರದೃಷ್ಟಿ ಹೊಂದಿದ್ದ ಶಂಕರ್‌ನಾಗ್ ಅವರಿಗೆ ಅಸಾಧ್ಯ ಎಂಬುದೇ ಗೊತ್ತಿರಲಿಲ್ಲ. ಈಗ ಕ್ರೇನ್ ಶಾಟ್ ತೆಗೆಯುವ ರೀತಿಯಲ್ಲೇ, ಅಂದು ಅಡಿಕೆ ಮರಗಳನ್ನು ಇದಕ್ಕಾಗಿ ಬಳಸಿಕೊಳ್ಳಲಾಗಿತ್ತು. ಪಕ್ಕದ ಮನೆಗಳಿಂದ ತೊಟ್ಟಿಲು ತಂದು, ಅದನ್ನು ಎರಡು ಅಡಿಕೆ ಮರಗಳ ಮಧ್ಯೆ ಕಟ್ಟಿ, ಅದರಲ್ಲಿ ಕ್ಯಾಮೆರಾಮನ್ ಕೂಡಿಸಿ ಚಿತ್ರೀಕರಿಸಿದ್ದು ಆಗಿನ ಕಾಲಕ್ಕೆ ಒಂದು ಸೋಜಿಗ.
1987–90ರ ಅವಧಿಯಲ್ಲಿ ಮಾಲ್ಗುಡಿ ಡೇಸ್ 100ಕ್ಕೂ ಹೆಚ್ಚು ದೇಶಗಳಲ್ಲಿ ಪ್ರಸಾರ ಕಂಡು, ಹತ್ತಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿತು. ವೈರುಧ್ಯವೆಂದರೆ, ಬ್ರಿಟಿಷ್ ವಿರೋಧಿ ಅಂಶಗಳಿದ್ದರೂ ಚಿತ್ರವು ಲಂಡನ್‌ನಲ್ಲಿ ಅತ್ಯುತ್ತಮ ಚಿತ್ರ ಎಂಬ ಗೌರವಕ್ಕೆ ಭಾಜನವಾಯಿತು.
ಸರ್ಕಾರದ ಅನುಮತಿ ಪಡೆದು, ಶಾಲಾ ಹಾಜರಾತಿಯಿಂದ ವಿನಾಯಿತಿ ಪಡೆದೆ. ಬಳಿಕ ನನ್ನ ಅಭಿನಯ, ಬೇಸಿಗೆ ರಜೆಗೆ ಸೀಮಿತವಾಯಿತು. ಅತ್ಯುತ್ತಮ ಪಾತ್ರಗಳ ಕೊರತೆ ಹಾಗೂ ಶಿಕ್ಷಣದ ಕಡೆಗೆ ನಾನು ಗಮನಹರಿಸಬೇಕಾದ ಕಾರಣ ನನ್ನ 16ನೇ ವಯಸ್ಸಿನಲ್ಲಿ ನಟನೆಗೆ ಇತಿಶ್ರೀ ಹೇಳಿದೆ.
ಸ್ನಾತಕೋತ್ತರ ಪದವಿ ಬಳಿಕ ಜಾಹೀರಾತು ಏಜೆನ್ಸಿ ಕಡೆ ಗಮನಕೊಟ್ಟೆ. 10 ಮತ್ತು 12ನೇ ತರಗತಿಯ ಫಲಿತಾಂಶವನ್ನು ಆನ್‌ಲೈನ್‌ನಲ್ಲಿ ಪ್ರಕಟಿಸುವ ಆಲೋಚನೆಗೆ ಶ್ರೀಕಾರ ಹಾಕಿದೆ. ಭೂದಾಖಲೆಗಳ ಡಿಜಿಟಲೀಕರಣ ಮಾಡುವ ಭೂಮಿ ಪ್ರಾಜೆಕ್ಟ್‌ನಲ್ಲಿ ಹಾಗೂ ಬೆಂಗಳೂರು–ಮೈಸೂರು ಇನ್‌ಫ್ರಾ ಪ್ರಾಜೆಕ್ಟ್‌ನಲ್ಲಿ ಕೈಜೋಡಿಸಿದೆ.
16 ವರ್ಷಗಳ ಬಣ್ಣದ ಹಾದಿಯಲ್ಲಿ 68 ಚಿತ್ರಗಳಲ್ಲಿ ನಟಿಸಿ, 6 ಅಂತರರಾಷ್ಟ್ರೀಯ ಪ್ರಶಸ್ತಿ, ತಲಾ ಒಂದು ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿ ಪಡೆದೆ. ಖುಷಿಯ ವಿಚಾರವೆಂದರೆ, ಈಗಲೂ ನನ್ನನ್ನು ಮಾಲ್ಗುಡಿಯ ಸ್ವಾಮಿ ಎಂದೇ ಜನ ಗುರುತಿಸುತ್ತಾರೆ.