ನಿದ್ದೆ ಎಂಬ ಮದ್ದು

ನಿದ್ದೆ ಎಂಬ ಮದ್ದು

‘ಹಗಲು ಎಚ್ಚರ, ರಾತ್ರಿ ಗಡದ್ದಾಗಿ ನಿದ್ದೆ ಮಾಡಿದರೆ ಕೊರೊನಾ ಸದ್ದಿರೋಲ್ವಂತೆ’ ಸುದ್ದಿಸಾರ ಹೇಳಿದೆ.

‘ಹಾಳಾದ್ದು, ಮಧ್ಯಾಹ್ನ ನಿದ್ದೆ ತಡೆಯೋ
ಕ್ಕಾಗೋಲ್ಲ, ರಾತ್ರಿ ಕಣ್ಮುಚ್ಚಿದರೂ ನಿದ್ದೆ ಸುಳಿಯೋಲ್ಲ’ ಅತ್ತೆ ಗೊಣಗಿದರು.

‘ಒಂದು ತುತ್ತು ಊಟ ಕಡಿಮೆ ಮಾಡಿದರೆ ಕಣ್ಣೆಳೆಯಲ್ಲವೇನೋ’ ನನ್ನ ಪರ್ಮಿಷನ್ ಕೇಳದೆ ನಾಲಿಗೆ ಒದರಿತ್ತು.

‘ಕರೆಂಟು ರಾತ್ರಿಯತನಕ ಬರೋಲ್ವಂತೆ, ಇಡ್ಲಿಗೆ ನೆನೆಸಿದ್ದೀನಿ, ಒರಳು ತೊಳೆದಿಟ್ಟಿದ್ದೀನಿ’ ನನ್ನವಳ ಮಾತಿನ ಬಾಣ ನನ್ನತ್ತ ನೇರವಾಗಿ ಬಂದು ಬಿತ್ತು. ಪುಟ್ಟಿ, ಕಿಸಕ್ಕನೆ ನಕ್ಕಳು.

‘ನಿದ್ದೇನೇ ಒಳ್ಳೆಯ ಮದ್ದು, ಆದರೆ ಬೇಕು ಅಂದಾಗ ಬರೋಲ್ಲ... ಬೇಡವೆಂದಾಗ ಕಣ್ಣೆಳೆಯುತ್ತೆ. ಎಲ್ಲಕ್ಕೂ ಯೋಗ ಬೇಕು’ ಮತ್ತೆ ಸುದ್ದಿಯತ್ತ ಎಲ್ಲರ ಚಿತ್ತ ತಿರುಗಿಸಿದೆ.

‘ಅಪ್ಪಾ, ಆ ವಿಷಯಕ್ಕೆ ಬಂದರೆ ಕಂಠಿ ಅಂಕಲ್ ಯೋಗಿ ಅಲ್ವಾ?’ ಪುಟ್ಟಿಯ ಸಮಯೋಚಿತ ನೆನಕೆ.


‘ಹೌದು ಪುಟ್ಟಿ, ಭಲೇ ಅದೃಷ್ಟವಂತ ಅವನು, ನೆನೆದಾಗ ಕುಳಿತಲ್ಲೇ ತೂಕಡಿಸ್ತಾನೆ’ ಎಂದೆ.

‘ಅವರಲ್ಲಿ ನೀವು ಯಾಕೆ ಸಲಹೆ ಕೇಳಬಾರದು?’ ಅತ್ತೆಯ ಮನವಿ.

‘ಅದಕ್ಕೇನಂತೆ ಈಗ್ಲೇ ಮಾಡ್ತೀನಿ’ ಎಂದು ಅವನ ನಂಬರ್ ಒತ್ತಿದೆ. ಬಿಜಿ...ಬಿಜಿ
ನನ್ನವಳ ಮುಖ ಸಪ್ಪಗಾಯಿತು.

ಛಲಬಿಡದ ತ್ರಿವಿಕ್ರಮನಂತೆ ಪ್ರಯತ್ನಿಸಿದೆ. ಕೊನೆಗೂ ಲೈನಿಗೆ ಬಂದ.
‘ಹಗಲಲ್ಲಿ ನಿದ್ದೆ ಬಾರದಿರಲು ನಿಮಗಿಷ್ಟವಾದ ಸಿನಿಮಾನೋ ಸೀರಿಯಲ್ಲೋ ಒಂದರ ಹಿಂದೊಂದು ನೋಡುತ್ತಲೇ ಇರಿ, ನಿದ್ದೆಯಿಂದ ದೂರವಿರಿ. ರಾತ್ರಿ ನಿದ್ದೆಬರಲು ನಿಮಗೆ ಹಿಡಿಸದ ಪುಸ್ತಕದ ಮೇಲೆ ಕಣ್ಣಾಡಿಸಿ, ಕೆಲವೇ ಸೆಕೆಂಡುಗಳಲ್ಲಿ ಗೊರಕೆ ಹೊಡೆಯದಿದ್ದರೆ ಕೇಳಿ’ ಎಂದು ಆಕಳಿಸುತ್ತಾ ಕರೆ ಮುಗಿಸಿದ.

‘ಸಲಹೆ ಕೊಟ್ರಾ’ ನನ್ನವಳ ಕುತೂಹಲ. ‘ಹ್ಞೂಂ ಸುಲಭ, ಕಷ್ಟವೇನಲ್ಲ’ ಎಂದೆ.

‘ಕರೆಂಟ್ ಬಂದಾಗ ರುಬ್ಬಿಕೊಂಡರಾಯ್ತು, ನಿಧಾನವಾದಷ್ಟೂ ಚೆನ್ನಾಗಿ ನೆನೆದಿರುತ್ತೆ’ ಅತ್ತೆ ನನ್ನ ಪರ ನಿಂತರು.
-ಕೆ.ವಿ.ರಾಜಲಕ್ಷ್ಮಿ

Munjane mathu

Munjane mathu

Kavana

Kavana

ಸೋಂಕು ಹರಡುವ ವನ್ಯಜೀವಿ ಮಾರುಕಟ್ಟೆ

ಸೋಂಕು ಹರಡುವ ವನ್ಯಜೀವಿ ಮಾರುಕಟ್ಟೆ


ಕೆಲವು ಪ್ರಾಣಿಗಳಲ್ಲಿ ವೈರಾಣುಗಳಿರುತ್ತವೆ. ಆ ಪ್ರಾಣಿಗೆ (ಸೋಂಕುವಾಹಕ) ಆ ವೈರಾಣು ಯಾವುದೇ ಹಾನಿ ಮಾಡುವುದಿಲ್ಲ. ಆದರೆ, ಆ (ಸೋಂಕುವಾಹಕ) ಪ್ರಾಣಿಯ ಸಂಪರ್ಕಕ್ಕೆ ಬಂದ ಬೇರೆ ಪ್ರಭೇದದ ಪ್ರಾಣಿಗಳಿಗೆ ವೈರಾಣು ದಾಟಿಕೊಳ್ಳುತ್ತದೆ. ವೈರಾಣು ತಗುಲಿದ ಪ್ರಾಣಿಯು ಅನಾರೋಗ್ಯ ಪೀಡಿತವಾಗುತ್ತದೆ. ನಂತರ ಪ್ರಾಣಿಯಿಂದ ಪ್ರಾಣಿಗಳಿಗೆ ವೈರಾಣು ಹರಡುತ್ತಾ ಹೋಗುತ್ತದೆ


ವೈರಾಣು ಇರುವ ಪ್ರಾಣಿ ಮತ್ತು ಸೋಂಕು ತಗುಲಿರುವ ಪ್ರಾಣಿಯ ಸಂಪರ್ಕಕ್ಕೆ ಬಂದ ಮನುಷ್ಯನಿಗೆ ವೈರಾಣು ದಾಟಿಕೊಳ್ಳುತ್ತದೆ. ಈ ಪ್ರಾಣಿಗಳ ಬೇಟೆಯಾಡುವುದು, ಮಾಂಸಕ್ಕಾಗಿ ಕತ್ತರಿಸುವುದು, ಮಾರಾಟದ ವೇಳೆ ಸ್ಪರ್ಶಿಸುವುದು ಮೊದಲಾದ ಸಂದರ್ಭದಲ್ಲಿ ವೈರಾಣು ಮನುಷ್ಯನಿಗೆ ದಾಟಿಕೊಳ್ಳುತ್ತದೆ. ಇವುಗಳನ್ನು ಖರೀದಿಸಿ, ಸಾಕಿಕೊಳ್ಳುವವರಿಗೂ ಸೋಂಕು ದಾಟಿಕೊಳ್ಳುತ್ತದೆ

ಸೋಂಕು ತಗುಲಿರುವ ವ್ಯಕ್ತಿಯ ಸಂಪರ್ಕಕ್ಕೆ ಬಂದ ಬೇರೆ ವ್ಯಕ್ತಿಗಳಿಗೂ ಸೋಂಕು ತಗಲುತ್ತದೆ. ಹೀಗೆಯೇ ಇದು ವ್ಯಕ್ತಿಗಳಿಂದ ವ್ಯಕ್ತಿಗಳಿಗೆ ಬಹುವೇಗವಾಗಿ ಹರಡುತ್ತದೆ. ಮನುಷ್ಯನ ದೇಹಕ್ಕೆ ಬಂದ ಮೇಲೆ ವೈರಾಣುಗಳ ರೋಗ ಹರಡುವ ರೀತಿಯಲ್ಲಿಯೂ ವ್ಯತ್ಯಾಸ ಆಗಬಹುದು

l ಕಾಡುಪ್ರಾಣಿಗಳ ಜತೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿರುವ ಮಾನವ ಸಂಪರ್ಕದಿಂದ ಪ್ರಾಣಿಗಳ ಸೋಂಕು ಮನುಷ್ಯರಿಗೂ ಅಂಟುತ್ತಿದೆ ಎಂದು ಅಮೆರಿಕ ಹಾಗೂ ಆಸ್ಟ್ರೇಲಿಯಾ ಸಂಶೋಧಕರ ತಂಡದ ಅಧ್ಯಯನ ವರದಿ ಹೇಳಿದೆ

l ಪ್ರಾಣಿಗಳಿಂದ ಇದುವರೆಗೆ 142 ವಿಧದ ವೈರಾಣುಗಳು ಮನುಷ್ಯರಿಗೆ ತಗುಲಿವೆ ಎಂದು ಅಂದಾಜಿಸಲಾಗಿದೆ

l ಪ್ರಾಣಿಗಳಿಂದ ಇದುವರೆಗೆ ಮನುಷ್ಯರಿಗೆ ಅಂಟಿದ ಶೇ 75ರಷ್ಟು ವೈರಾಣುಗಳಲ್ಲಿ ವಾನರಗಳು, ಇಲಿಗಳು ಹಾಗೂ ಬಾವಲಿಗಳು ಕಾರಣವಾಗಿವೆ. ಬಾವಲಿಗಳು ಸಾರ್ಸ್‌, ಎಬೊಲಾದಂತಹ ಸಾಂಕ್ರಾಮಿಕ ರೋಗಗಳ ವೈರಾಣು ಹರಡಲು ಕಾರಣ ಎನ್ನುತ್ತವೆ ಸಂಶೋಧನಾ ವರದಿಗಳು

l ವಾರ್ಷಿಕ ಸಾವಿರಾರು ಕೋಟಿ ಡಾಲರ್‌ ವಹಿವಾಟಿಗೆ ಕಾರಣವಾಗುವ ವನ್ಯಜೀವಿ ಹಾಗೂ ವನಸ್ಪತಿಗಳ ಜಾಗತಿಕ ಮಾರುಕಟ್ಟೆಗಳನ್ನು ಕಾಯಂ ಆಗಿ ಮುಚ್ಚುವಂತೆ ಪ್ರಪಂಚದಾದ್ಯಂತ ಒತ್ತಡಗಳು ಹೆಚ್ಚುತ್ತಿವೆ

l ಜಾಗತಿಕ ವನ್ಯಜೀವಿ ಮಾರುಕಟ್ಟೆಯಲ್ಲಿ ಮಂಗಗಳು, ನರಿಗಳು, ಜಿಂಕೆಗಳು, ಮೊಸಳೆ, ಹಾವು ಸೇರಿದಂತೆ ಸರೀಸೃಪಗಳು, ಸಿವೆಟ್‌ಗಳು ಅಳಿಲುಗಳು, ಮೊಲಗಳು, ಇಲಿಗಳು, ನೂರಾರು ಪ್ರಭೇದಗಳ ಪಕ್ಷಿಗಳು ಮಾರಾಟವಾಗುತ್ತವೆ. ಚೀನಾದ ಗುವಾಂಗ್‌ಝೌನಲ್ಲಿ ಜೀವಂತ ಪ್ರಾಣಿಗಳ ಅತಿ ದೊಡ್ಡ ಮಾರುಕಟ್ಟೆಯಿದೆ. ಇಂಡೋನೇಷ್ಯಾ ಹಾಗೂ ಥಾಯ್ಲೆಂಡ್‌ಗಳು ಸಹ ಏಷ್ಯಾದ ಪ್ರಮುಖ ವನ್ಯಜೀವಿ ಮಾರುಕಟ್ಟೆ ಎನಿಸಿವೆ

l ಭಾರತದಂತಹ ಕೆಲವು ದೇಶಗಳಲ್ಲಿ ಕಾಡುಪ್ರಾಣಿಗಳನ್ನು ಬೇಟೆಯಾಡುವುದು ಅಥವಾ ಹಿಡಿದು ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಆದರೆ, ಚೀನಾದಲ್ಲಿ ಕೆಲವು ಕಾಡುಪ್ರಾಣಿಗಳ ಮಾರಾಟಕ್ಕೆ ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗಿದೆ. ಅಲ್ಲಿನ ವನ್ಯಜೀವಿ ಮಾರುಕಟ್ಟೆಗಳಲ್ಲಿ ಬಾವಲಿಗಳು, ನವಿಲುಗಳು ಹಾಗೂ ವಿವಿಧ ಪ್ರಭೇದಗಳ ಪಕ್ಷಿಗಳು ಭಾರಿ ಪ್ರಮಾಣದಲ್ಲಿ ಮಾರಾಟವಾಗುತ್ತವೆ. ಕೊರೊನಾ ವೈರಾಣು ಹರಡಿದ ಮೇಲೆ ಚೀನಾ ದೇಶವು ವನ್ಯಜೀವಿ ಮಾರುಕಟ್ಟೆ ವಹಿವಾಟನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

ಪ್ರಾಣಿಗಳಿಂದ ವಿವಿಧ ಸ್ವರೂಪದಲ್ಲಿ ಮನುಷ್ಯನಿಗೆ ಸೋಂಕು ಅಂಟುತ್ತದೆ. ಸೊಳ್ಳೆಗಳ ಕಡಿತ, ಅನಾರೋಗ್ಯಪೀಡಿತ ಪ್ರಾಣಿಗಳ ಸಂಪರ್ಕ, ಕಾಡುಪ್ರಾಣಿಗಳ ಮಾಂಸವನ್ನು ಬೇಯಿಸದೇ ತಿನ್ನುವುದು ಹೀಗೆ ಯಾವುದೇ ವಿಧದಲ್ಲಿ ಸೋಂಕು ತಗುಲಬಹುದು. ಬ್ಯಾಕ್ಟೀರಿಯಾಗಳು, ಪರಾವಲಂಬಿ ಜೀವಿಗಳು, ವೈರಾಣುಗಳು ಹಾಗೂ ಶೀಲಿಂಧ್ರಗಳು – ಇವುಗಳಲ್ಲಿ ಯಾವುದೇ ರೂಪದಲ್ಲಿ ಸೋಂಕು ಮನುಷ್ಯನ ಶರೀರವನ್ನು ಸೇರಬಹುದು. ಜಗತ್ತಿನ ಶೇ 16ರಷ್ಟು ಪ್ರಮಾಣದ ಸಾವುಗಳಿಗೆ ಸೋಂಕು ಕಾರಣ ಎಂದು ಅಮೆರಿಕ
ರಾಷ್ಟ್ರೀಯ ಆರೋಗ್ಯ ಸಂಸ್ಥೆ ಲೆಕ್ಕ ಹಾಕಿದೆ.

ಕೊರೊನಾ ಕಂಟಕ ವಿಪರೀತ ಪ್ರಮಾಣ ತಲುಪಿರುವ ಈ ಹಂತದಲ್ಲಿ ಜಗತ್ತಿನ ಎಲ್ಲೆಡೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಕುರಿತು ಮಾತನಾಡಲಾಗುತ್ತಿದೆ. ಆದರೆ, ಇಂತಹ ಸೋಂಕುಗಳು ಭವಿಷ್ಯದಲ್ಲಿ ಕಾಡದಿರಬೇಕಾದರೆ ಕಾಡುಪ್ರಾಣಿಗಳ ಜತೆ ಅಂತರ ಕಾಯ್ದುಕೊಳ್ಳುವುದು ಮುಖ್ಯವಾದುದು ಎಂಬುದು ವಿಜ್ಞಾನಿಗಳ ಸಲಹೆಯಾಗಿದೆ.

ಚೀನಾ, ಥಾಯ್ಲೆಂಡ್‌, ಇಂಡೋನೇಷ್ಯಾ ಸೇರಿದಂತೆ ಜಗತ್ತಿನ ಹಲವು ದೇಶಗಳಲ್ಲಿ ಅಸ್ತಿತ್ವದಲ್ಲಿರುವ ಜೀವಂತ ಕಾಡುಪ್ರಾಣಿಗಳ ಮಾರುಕಟ್ಟೆಗಳು ಮಾನವ–ಪ್ರಾಣಿಗಳ ನೇರ ಸಂಪರ್ಕಕ್ಕೆ ಆಸ್ಪದ ನೀಡುವುದರಿಂದ ಸೋಂಕು ಹರಡುವ ಪ್ರಮುಖ ತಾಣಗಳಾಗಿವೆ ಎಂದು ವಿಶ್ಲೇಷಿಸಲಾಗಿದೆ.

ಜಗತ್ತಿನ ಜನಸಂಖ್ಯೆ ಇದೀಗ 900 ಕೋಟಿಗೆ ಹತ್ತಿರವಾಗಿದೆ. ಇಷ್ಟೊಂದು ಪ್ರಮಾಣದ ಜನರಿಗೆ ಆಹಾರ ಉತ್ಪಾದನೆ ಮಾಡುವುದೂ ಒಂದು ದೊಡ್ಡ ಸವಾಲಾಗಿದೆ. ಹೀಗಾಗಿ ವರ್ಷದಿಂದ ವರ್ಷಕ್ಕೆ ವನ್ಯಜೀವಿ ವಲಯವನ್ನು ಆಕ್ರಮಿಸುವ ಪರಿಪಾಟ ಜಗತ್ತಿನ ಎಲ್ಲ ಭಾಗಗಳಲ್ಲೂ ನಡೆದಿದೆ. ಪ್ರತಿವರ್ಷ 30 ಲಕ್ಷ ಹೆಕ್ಟೇರ್‌ನಷ್ಟು ಕಾಡು ಬಲಿಯಾಗುತ್ತಿದೆ ಎನ್ನುತ್ತವೆ ಸಂಶೋಧನಾ ವರದಿಗಳು.

ಚೀನಾದ ವುಹಾನ್‌ನಲ್ಲಿನ ವನ್ಯಜೀವಿಗಳ ಮಾರುಕಟ್ಟೆಯಿಂದ ಮನುಷ್ಯನಿಗೆ ಸೋಂಕು ತಗುಲಿದೆ. ಈ ಸೋಂಕು ತಗುಲಿದ ಗುಂಪು ಇತರ ಮಾರುಕಟ್ಟೆಗಳ ಜತೆ ಸಂಪರ್ಕ ಹೊಂದಿತ್ತು

ಈ ಗುಂಪನಿಂದ ವುಹಾನ್‌ ನಗರವಾಸಿಗಳಿಗೆ ನಂತರ ಬೇರೆ ದೇಶಗಳಿಗೆ ಮತ್ತು ಈಗ ಜಾಗತಿಕವಾಗಿ ಹರಡಿದೆ

ಯಾವ ಪ್ರಾಣಿಯಿಂದ ಈ ವೈರಾಣು ಬಂದಿದೆ ಎಂಬುದು ದೃಢಪಟ್ಟಿಲ್ಲ. ಆದರೆ, ಸಾರ್ಸ್‌ ಸೋಂಕಿಗೆ ಕಾರಣವಾಗಿದ್ದ ಬಾವಲಿಗಳ ಕೊರೊನಾ ವೈರಾಣುವನ್ನೇ ಹೋಲುತ್ತಿದೆ ಈಗಿನ ಕೋವಿಡ್‌–19 ಕಾಯಿಲೆಗೆ ಕಾರಣವಾಗುವ ವೈರಾಣು. ಬಾವಲಿಯಿಂದ ಸಿವೆಟ್‌ಗಳಿಗೆ, ನಂತರ ಸಿವೆಟ್‌ಗಳಿಂದ ಮನುಷ್ಯರಿಗೆ ಹರಡಿದೆ ಎಂಬ ಪ್ರತಿಪಾದನೆ ಇದೆ. ಆದರೆ, ಇದಕ್ಕೆ ಯಾವುದೇ ಸಾಕ್ಷ್ಯಾಧಾರ ಇಲ್ಲ

ಆಧಾರ: ವೈಲ್ಡ್‌ಲೈಫ್‌ ಕನ್ಸರ್ವೇಷನ್ ಸೊಸೈಟಿ ಇಂಡಿಯಾ, ಬಿಬಿಸಿ

ಮಾನವ ಕುಲಕ್ಕೆ ಹೊಸ ಪಾಠ ಕಲಿದೆ ಕೊರೊನಾ

Zoom ಮಾಡಲು ಮೊದಲು image ಮೇಲೆ ಒಂದು click ಮಾಡಿ, ನಂತರ zoom ಮಾಡಿ.

ಮಾನವ ಕುಲಕ್ಕೆ ಹೊಸ ಪಾಠ ಕಲಿದೆ ಕೊರೊನಾ

ಮಾನವ ಕುಲಕ್ಕೆ ಹೊಸ ಪಾಠ ಕಲಿದೆ ಕೊರೊನಾ

ಮಾನವ ಕುಲಕ್ಕೆ ಹೊಸ ಪಾಠ ಕಲಿದೆ ಕೊರೊನಾ

ವ್ಯಕ್ತಿಸ್ವಾತಂತ್ರ್ಯ ಹಾಗೂ ಸಮಷ್ಟಿಯ ಹಿತದ ನಡುವೆ ಬೇಕು ಸಮತೋಲನ

ವ್ಯಕ್ತಿಸ್ವಾತಂತ್ರ್ಯ ಹಾಗೂ ಸಮಷ್ಟಿಯ ಹಿತದ ನಡುವೆ ಬೇಕು ಸಮತೋಲನ
ವ್ಯಕ್ತಿಸ್ವಾತಂತ್ರ್ಯ ಹಾಗೂ ಸಮಷ್ಟಿಯ ಹಿತದ ನಡುವೆ ಬೇಕು ಸಮತೋಲನ



ವ್ಯಕ್ತಿವಾದ ಅಥವಾ ಪ್ರತೀ ವ್ಯಕ್ತಿಗೂ ಅವನದೇ ಆದ ಬೆಲೆ ಇದೆ ಎನ್ನುವ ನಂಬಿಕೆಯು ನಮ್ಮ ಅರ್ಥವ್ಯವಸ್ಥೆ, ನ್ಯಾಯದಾನ ವ್ಯವಸ್ಥೆ ಹಾಗೂ ಸಾಮಾಜಿಕ ವ್ಯವಸ್ಥೆಯ ಹಿಂದಿನ ಆಲೋಚನೆಗಳಿಗೆ ನೆಲೆಗಟ್ಟಾಗಿ ಶತಮಾನ
ಗಳಿಂದಲೂ ನಿಂತುಕೊಂಡಿದೆ. ಆದರೆ, ಜನರ ಹಕ್ಕುಗಳು ಹಾಗೂ ಸ್ವಾತಂತ್ರ್ಯಕ್ಕೆ ಹೆಚ್ಚಿನ ಬೆಲೆ ಎನ್ನುವ ಮೌಲ್ಯಕ್ಕೆ ಈಚಿನ ದಿನಗಳಲ್ಲಿ ತೀವ್ರ ಸವಾಲುಗಳು ಎದುರಾಗಿವೆ. ಐರೋಪ್ಯ ಜಗತ್ತು ಕಂಡ ಜ್ಞಾನೋದಯದ ಕಾಲಘಟ್ಟ
ದಲ್ಲಿಯೇ ವ್ಯಕ್ತಿವಾದದ ಮೂಲವೂ ಇದೆ. ಪ್ರಭುತ್ವ ಅಥವಾ ಸಾಮಾಜಿಕ ಗುಂಪುಗಳ ಹಿತಾಸಕ್ತಿಗಳಿಗಿಂತಲೂ ವ್ಯಕ್ತಿಯ ಹಿತಾಸಕ್ತಿಗಳು ಹೆಚ್ಚು ಮುಖ್ಯವಾಗುತ್ತವೆ ಎಂದು ವ್ಯಕ್ತಿವಾದ ಹೇಳುತ್ತದೆ. ಇದು ಮುಕ್ತ ಮಾರುಕಟ್ಟೆಯ ವ್ಯವಸ್ಥೆಗೆ ಜನ್ಮನೀಡಿತು ಕೂಡ.

ಪಾಶ್ಚಿಮಾತ್ಯ ಶೈಲಿಯ ವ್ಯಕ್ತಿವಾದವು ಎರಡನೆಯ ವಿಶ್ವಯುದ್ಧದ ನಂತರದಲ್ಲಿ ಹೆಚ್ಚು ವ್ಯಾಪಕವಾಯಿತು. ಯುರೋಪಿನ ಬಹುದೊಡ್ಡ ಭೂಪ್ರದೇಶವು ಕಮ್ಯುನಿಸ್ಟ್‌ ವ್ಯವಸ್ಥೆಯ ಅಡಿಯಲ್ಲಿ ಇದ್ದರೂ, ಚೀನಾವು ಮುಕ್ತ ಮಾರುಕಟ್ಟೆಗೆ ತೆರೆದುಕೊಳ್ಳದಿದ್ದರೂ ಅಮೆರಿಕದ ನಾಯಕತ್ವದ ಕಾರಣದಿಂದಾಗಿ ವ್ಯಕ್ತಿವಾದವು ಮುನ್ನಡೆ ಕಾಣುತ್ತಿತ್ತು– ಸ್ವಾಭಿಮಾನಿ ಹಾಗೂ ಗಟ್ಟಿತನದ ಮನುಷ್ಯ ಈ ವಾದದ ಕೇಂದ್ರಬಿಂದುವಿನಲ್ಲಿ ಇದ್ದ, ಮುಕ್ತ ಆಲೋಚನೆಗಳ ಮೂಲಕ ಪ್ರಗತಿಯ ಚಕ್ರ ತಿರುಗಿಸುತ್ತಿದ್ದ.

ಆ ಕಾಲಘಟ್ಟದಲ್ಲೇ ಇನ್ನೊಂದು ಬಗೆಯ ವ್ಯಕ್ತಿವಾದ ಕೂಡ ಚಾಲ್ತಿಯಲ್ಲಿ ಇತ್ತು. ಇದು ಗಾಂಧೀಜಿ ಮತ್ತು ಅವರ ಸಲಹೆಗಾರರ ನಂಬಿಕೆಗಳನ್ನು ಆಧರಿಸಿತ್ತು. ಈ ವ್ಯಕ್ತಿ
ವಾದಕ್ಕೆ ಆಧ್ಯಾತ್ಮಿಕ ಬೇರುಗಳು ಇದ್ದವು. ಪಾಶ್ಚಿಮಾತ್ಯ
ಶೈಲಿಯ ವ್ಯಕ್ತಿವಾದವು ಭೌತಿಕವಾದವಷ್ಟೇ ಆಗಿಬಿಡ
ಬಹುದು ಎಂಬುದನ್ನು ಗಾಂಧೀಜಿ ಗುರುತಿಸಿದ್ದರು. ವ್ಯಕ್ತಿಯು ತನ್ನ ಆಸೆಗಳನ್ನು ಪೂರೈಸಿಕೊಳ್ಳುವ ದಾರಿಗಳನ್ನು ಬಲ್ಲವನಷ್ಟೇ ಅಲ್ಲ; ಆತ ಸರಿ–ತಪ್ಪುಗಳನ್ನು ಗುರುತಿಸ
ಬಲ್ಲವ, ತನ್ನ ಕೃತ್ಯಗಳಿಗೆ ಉತ್ತರದಾಯಿ ಕೂಡ ಆಗಬಲ್ಲವ ಎಂಬುದಾಗಿ ಕಂಡುಕೊಂಡಿದ್ದರು. ಸಾಮಾಜಿಕ ಪ್ರಗತಿಯ ಕೇಂದ್ರಭಾಗದಲ್ಲಿ ಮಾನವ ಹಕ್ಕುಗಳನ್ನು ಇರಿಸಲಾಗಿತ್ತು. ಕಟ್ಟಕಡೆಯ ಮನುಷ್ಯನ ಮೇಲೆ ಗಮನ ನೀಡುವ ಈ ವ್ಯವಸ್ಥೆಯಡಿ, ಆತನ ಹೆಸರಿನಲ್ಲೇ ಸಮಾಜ ಮತ್ತು ಪ್ರಭುತ್ವವು ತಮ್ಮ ಧರ್ಮ ಪಾಲಿಸುತ್ತಿದ್ದವು.

ಮೊದಲ ಮಾದರಿಯ ವ್ಯಕ್ತಿವಾದವು ಮೂರು ಶತಮಾನಗಳ ಕಾಲ ತೀವ್ರಬಗೆಯ ಅನ್ವೇಷಣೆಗಳನ್ನು
ಸಾಧ್ಯವಾಗಿಸಿತು. ಉದ್ಯಮಿಗಳು, ಸೃಜನಶೀಲ ಕಲಾವಿದರು, ಸಾರ್ವಜನಿಕ ಬುದ್ಧಿಜೀವಿಗಳು ಆಲೋಚನೆಗಳಿಗೆ, ಉತ್ಪನ್ನಗಳಿಗೆ ಮತ್ತು ಸೇವೆಗಳಿಗೆ ಜಾಗತಿಕ ಮಾರುಕಟ್ಟೆಯನ್ನು ಸೃಷ್ಟಿಸಿದರು. ಇದು ಹೆಚ್ಚಿನ ಜನರಿಗೆ ಹಿಂದೆಂದೂ ಇಲ್ಲದಷ್ಟು ಭೌತಿಕ ಸಂಪತ್ತನ್ನು ಸೃಷ್ಟಿಸಿತು– ಈ ಮಾತಿಗೆ ಪ್ರತಿವಾದಗಳು ಇವೆ.

ಎರಡನೆಯ ಮಾದರಿಯ ವ್ಯಕ್ತಿವಾದವು, ಹಲವು ದುರ್ಬಲ ಗುಂಪುಗಳ ಅಭಿವೃದ್ಧಿಗಾಗಿ, ಅವರಿಗೆ ಬೆಂಬಲವಾಗಿ ಪ್ರಭುತ್ವ ಮತ್ತು ಸಮಾಜ ಮಧ್ಯಪ್ರವೇಶ ಮಾಡುವುದಕ್ಕೆ ಪ್ರೇರಣೆಯಾಯಿತು. ವ್ಯಕ್ತಿಯ ಘನತೆಯನ್ನು, ಸವಾಲುಗಳನ್ನು ಎದುರಿಸುವ ಸಾಮರ್ಥ್ಯ
ವನ್ನು ಕಾಪಾಡಿಕೊಂಡೇ ಪ್ರತೀ ವ್ಯಕ್ತಿಗೂ ಸಾಮಾಜಿಕ ಸುರಕ್ಷಾ ಕ್ರಮಗಳನ್ನು ಕಲ್ಪಿಸಿಕೊಡುವ ಇದು ಪೂರ್ಣಪ್ರಮಾಣದಲ್ಲಿ ಜಾರಿಯಾಗದೇ ಇದ್ದರೂ  ಬಹುದೊಡ್ಡ ಪ್ರಯೋಗವಂತೂ ಹೌದು. ಆದರೆ, ವ್ಯಕ್ತಿವಾದ ಹಾಗೂ ವ್ಯಕ್ತಿಗೆ ಪ್ರಾಧಾನ್ಯ ನೀಡುವ ವ್ಯವಸ್ಥೆಗೆ ಕಳೆದೊಂದು ದಶಕದಲ್ಲಿ ಗಂಭೀರ ಅಪಾಯಗಳು ಎದುರಾಗಿವೆ.

ಇದಕ್ಕೆ ಮೂರು ಪ್ರಮುಖ ಕಾರಣಗಳು ಇವೆ. ಆರ್ಥಿಕ ಕುಸಿತದ ಜೊತೆ ಭಯೋತ್ಪಾದನೆಯೂ ಸೇರಿಕೊಂಡಿದ್ದು ಮೊದಲ ಕಾರಣ. 2001ರಲ್ಲಿ ಅಮೆರಿಕದ ಮೇಲೆ ಭಯೋತ್ಪಾದಕರ ದಾಳಿ ನಡೆದಾಗ ಪರಿಸ್ಥಿತಿ ಬದಲಾಯಿತು, ಇದು ವ್ಯಕ್ತಿವಾದಕ್ಕೆ ಎದುರಾದ ಅತಿದೊಡ್ಡ ಶಾಕ್‌ ಟ್ರೀಟ್ಮೆಂಟ್‌. ವ್ಯಕ್ತಿವಾದ ಹಾಗೂ ಉದಾರತಾವಾದದ ಗಟ್ಟಿ ನೆಲೆ ಅಮೆರಿಕ. ಆದರೆ ಅಲ್ಲಿನ ಜನ ಸಾರ್ವಜನಿಕ ಸುರಕ್ಷತೆಗಾಗಿ ಹಲವು ಸ್ವಾತಂತ್ರ್ಯ
ಗಳನ್ನು ಮತ್ತು ಖಾಸಗಿತನವನ್ನು ಬಿಟ್ಟುಕೊಡ
ಬೇಕಾಯಿತು. ಇದಾದ ನಂತರ ಎದುರಾಗಿದ್ದು 2008ರ ಆರ್ಥಿಕ ಕುಸಿತ. ಇದರ ಬೆನ್ನಿಗೇ ನಾವು ಜಾಗತೀಕರಣೋ
ತ್ತರ ಯುಗವನ್ನು ಪ್ರವೇಶಿಸಿದೆವು. ಕಾಕತಾಳೀಯ ಎಂಬಂತೆ ಪ್ರಭುತ್ವದ ಅಧಿಕಾರವನ್ನು ಕೇಂದ್ರೀಕೃತ
ವಾಗಿಸುವ ಸರ್ವಾಧಿಕಾರಿ ಆಡಳಿತಗಳೂ ಆ ಹೊತ್ತಿನಲ್ಲಿ ಪ್ರವರ್ಧಮಾನಕ್ಕೆ ಬಂದವು.


ವ್ಯಕ್ತಿಯೊಬ್ಬ ತನ್ನ ದೇಶದ ಬಗ್ಗೆ ಹೊಂದಿರುವ ಪ್ರೀತಿಯನ್ನು ಪ್ರಾಮಾಣಿಕ ಟೀಕೆಗಳ ಮೂಲಕವೂ
ವ್ಯಕ್ತಪಡಿಸಬಹುದಾಗಿದ್ದ ಭಾವುಕ ದೇಶಭಕ್ತಿಯು ಹಲವು ದೇಶಗಳಲ್ಲಿ ಬಿರುಸಿನ ರಾಷ್ಟ್ರೀಯವಾದವಾಗಿ ಪರಿವರ್ತನೆ ಕಂಡಿತು. ಭಿನ್ನಮತಕ್ಕೆ ವಿರೋಧ ಎದುರಾಯಿತು. ಇದು ಸ್ವತಂತ್ರ ವ್ಯಕ್ತಿಯನ್ನು ರಾಜಕೀಯ ವೇದಿಕೆಯಿಂದ ಮತ್ತಷ್ಟು ಹೊರಗೆ ತಳ್ಳಿತು.

ಬೃಹತ್ ಸಾಮಾಜಿಕ ವೇದಿಕೆಗಳನ್ನು ಕಲ್ಪಿಸಿದ ಇಂಟರ್ನೆಟ್ ದೈತ್ಯರ ಉಗಮ ಎರಡನೆಯ ಕಾರಣ. ಆರಂಭದಲ್ಲಿ ಇವು ವ್ಯಕ್ತಿಪ್ರಾಧಾನ್ಯವನ್ನು ರಕ್ಷಿಸುವಂತೆ ಕಂಡುಬಂದವು. ಗ್ರಾಹಕನೇ ರಾಜನಾಗಿದ್ದ; ಕಾರ್ಮಿಕನಾಗಿದ್ದ ನೌಕರ ಸ್ವಯಂಉದ್ಯೋಗ ಕಂಡುಕೊಂಡು ಉದ್ಯಮಿ
ಯಾಗಿದ್ದ; ಪೌರನು (ಸಿಟಿಜನ್) ನೆಟ್ಟಿಗ (ನೆಟಿಜನ್) ಆಗಿದ್ದ. ಆತ ಎಲ್ಲ ವಿಚಾರಗಳ ಬಗ್ಗೆಯೂ ತನ್ನ ಅಭಿಪ್ರಾಯ ವ್ಯಕ್ತಪಡಿಸಬಲ್ಲವನಾಗಿದ್ದ. ಆದರೆ ವ್ಯಕ್ತಿ ಹೊಂದಿರುವ ಆಯ್ಕೆಯು ಮರೀಚಿಕೆಯಂತಾಯಿತು. ಈಗ ಕಣ್ಗಾವಲು ಬಂಡವಾಳಶಾಹಿ ವ್ಯವಸ್ಥೆ ಎಂದು ಹೇಳುವುದರ ಆರಂಭ ಅದಾಗಿತ್ತು. ಇಲ್ಲಿ ಗುತ್ತಿಗೆ ಆಧಾರದಲ್ಲಿ ಕರೆದಾಗ ಬಂದು ಕೆಲಸ ಮಾಡುವವರಿಗೆ ಆದಾಯ ಕಡಿಮೆ, ಕೆಲಸ ಜಾಸ್ತಿ! ಗ್ರಾಹಕನು ಇಲ್ಲಿ ದತ್ತಾಂಶ ಮಾತ್ರ; ಕೃತಕ ಬುದ್ಧಿಮತ್ತೆಯನ್ನು ಬಳಸಿ ಆತನ ಸ್ವತಂತ್ರ ಆಲೋಚನೆಗಳನ್ನು ಕೂಡ ಬೇಕಾದಂತೆ ಬಾಗಿಸಬಹುದು. ಇದೇ ತಂತ್ರಜ್ಞಾನವು ಕಣ್ಗಾವಲು ವ್ಯವಸ್ಥೆಗೆ ಇನ್ನಷ್ಟು ಇಂಬು ನೀಡಿತು, ವ್ಯಕ್ತಿಯ ಹಕ್ಕುಗಳು ಮತ್ತು ಖಾಸಗಿತನವನ್ನು ಇನ್ನಷ್ಟು ಕಿರಿದಾಗಿಸಿತು. ಚುನಾವಣಾ ಪ್ರಜಾತಂತ್ರದಲ್ಲಿ ಅತ್ಯಮೂಲ್ಯ
ವಾದ ವ್ಯಕ್ತಿಯ ಮತಗಳನ್ನು ಕೂಡ ತಿರುಚಬಹುದು!

ಮೂರನೆಯ ಕಾರಣ, ಜಗತ್ತಿನಲ್ಲಿ ಪರಸ್ಪರ ಅವಲಂಬನೆ ಇನ್ನಷ್ಟು ಹೆಚ್ಚಾಗಿರುವುದು. ಹವಾಮಾನ ಬದಲಾವಣೆ ಹಾಗೂ ವಾಯುಮಾಲಿನ್ಯಕ್ಕೆ ಗಡಿಗಳ ಹಂಗಿಲ್ಲ. ಆಫ್ರಿಕಾದ ಬ್ಯಾಕ್ಟೀರಿಯಾಗಳು ಅಮೆರಿಕದ ಜನರನ್ನು ಅನಾರೋಗ್ಯಕ್ಕೆ ಈಡುಮಾಡಬಲ್ಲವು.
ಇಂಡೊನೇಷ್ಯಾದಲ್ಲಿ ಅರಣ್ಯಕ್ಕೆ ಬೆಂಕಿ ಬಿದ್ದರೆ ಏಷ್ಯಾದ ಜನ ಉಸಿರಾಡಲು ಕಷ್ಟಪಡಬೇಕಾಗುತ್ತದೆ. ನಾವು ಎಚ್ಚರಿಕೆಯಿಂದ ಇರದಿದ್ದರೆ, ಕೋವಿಡ್–19 ವ್ಯಕ್ತಿವಾದದ ಶವಪೆಟ್ಟಿಗೆಯ ಮೇಲಿನ ಅಂತಿಮ ಮೊಳೆ ಆಗಬಹುದು. ವೈಯಕ್ತಿಕ ಹಕ್ಕು, ಸೌಲಭ್ಯಗಳನ್ನು ನಾವು ತಕ್ಷಣವೇ ಬಿಟ್ಟುಕೊಡುವಂತೆ, ಪ್ರಭುತ್ವದ ಹಾಗೂ ನಮ್ಮ ಹತ್ತಿರದ ಗುಂಪುಗಳ ನಿರ್ದೇಶನಗಳನ್ನು ಒಪ್ಪಿಕೊಳ್ಳು
ವಂತೆ ಮಾಡಿದೆ ಈ ಕಾಯಿಲೆ. ಈ ಸ್ವಾತಂತ್ರ್ಯಗಳನ್ನು
ಬಳಸುವುದನ್ನು ಮುಂದುವರಿಸಿದರೆ ಆಗುವ ಅಪಾಯವನ್ನು ಗಮನಿಸಿ, ಅವುಗಳನ್ನು ಬಿಟ್ಟುಕೊಡುವ ತೀರ್ಮಾನ ಮಾಡಿದ್ದು ಸರಿಯಾಗಿಯೇ ಇದೆ.

ಆದರೆ, ವ್ಯಕ್ತಿವಾದದ ಒಳ್ಳೆಯ ಅಂಶಗಳನ್ನು ಕಳೆದು
ಕೊಳ್ಳದಿರುವ ಎಚ್ಚರಿಕೆಯೂ ನಮ್ಮಲ್ಲಿರಬೇಕು.
‌ಕಾನೂನಿನ ಆಡಳಿತಕ್ಕೆ ಅಥವಾ ವಿಸ್ತೃತ ವ್ಯವಸ್ಥೆಗಳಿಗೆ
ಉತ್ತರದಾಯಿ ಅಲ್ಲದ ದಬ್ಬಾಳಿಕೆಯ ಗುಂಪುಗಳ ಎದುರು ವ್ಯಕ್ತಿಯ ಅಸ್ಮಿತೆ ಮರೆಯಾಗದಂತೆಯೂ ನಾವು ನೋಡಿಕೊಳ್ಳಬೇಕು. ಸರ್ಕಾರದ ಆದೇಶವನ್ನು ಪಾಲಿಸುವುದು ಒಂದು ವಿಚಾರ; ತರ್ಕವಿಲ್ಲದ ಭೀತಿಗೆ ಬಲಿಯಾಗುವುದು ಇನ್ನೊಂದು ವಿಚಾರ. ಜನ ತಾವೇ ಕಾನೂನು ಕೈಗೆತ್ತಿಕೊಳ್ಳುವುದು ಹೆಚ್ಚುತ್ತಿರುವುದನ್ನು
ಈಗಾಗಲೇ ನೋಡುತ್ತಿದ್ದೇವೆ. ಭಯಭೀತರಾದ ಗ್ರಾಮಸ್ಥರು ಹೊರಗಿನವರಿಗೆ ಪ್ರವೇಶ ನಿರಾಕರಿಸುವುದು; ವೈದ್ಯರಿಗೆ ಪೇಟೆಯಲ್ಲಿರುವ ತಮ್ಮ ಮನೆಗಳಿಗೆ ಹಿಂದಿರುಗಲು ಅವಕಾಶ ನಿರಾಕರಿಸಿರುವುದು; ಯಾವ ಭೀತಿಯೂ ಇಲ್ಲದೆ ಪೊಲೀಸರು ಲಾಠಿ ಬೀಸುವುದು...

ಸಾಂಕ್ರಾಮಿಕವೊಂದಕ್ಕೆ ಈ ರೀತಿಯಲ್ಲಿ ಪ್ರತಿಕ್ರಿಯಿಸು
ವುದು ವ್ಯಕ್ತಿವಾದದ ಒಳ್ಳೆಯ ಅಂಶಗಳನ್ನು ಸದ್ಯದ ಭವಿಷ್ಯದಲ್ಲಿ ಕೊನೆಗೊಳಿಸಬಹುದು. ವ್ಯಕ್ತಿಸ್ವಾತಂತ್ರ್ಯ ಹಾಗೂ ಸಮಷ್ಟಿಯ ಹಿತದ ನಡುವಿನ ಸಮತೋಲನವನ್ನು
ಪುನಃ ಸ್ಥಾಪಿಸಲು ಸಮಾಜವು ತಕ್ಷಣ ಕ್ರಿಯಾಶೀಲವಾಗಬೇಕು. ಯಾವ ಮನುಷ್ಯನೂ ದ್ವೀಪವಲ್ಲ; ಆದರೆ ಪ್ರತೀ ವ್ಯಕ್ತಿಗೂ ಇರುವ ಮೌಲ್ಯವನ್ನು ಕಡೆಗಣಿಸಲಾಗದು. ಎಲ್ಲ ಒಳ್ಳೆಯ ಸಮಾಜಗಳ ನೆಲೆಗಟ್ಟು ಅದು.
-ರೋಹಿಣಿ ನಿಲೇಕಣಿ

ಗಂಡೋ ಹೆಣ್ಣೋ? ಹಾಸ್ಯ

ಗಂಡೋ ಹೆಣ್ಣೋ? ಹಾಸ್ಯ

ಕೊರೊನಾ ನಾಶಕ್ಕೆ ಶಕ್ತಿಯಂತ್ರ ಮಂತ್ರಿಸಿ ಕೊಡುವುದಾಗಿ ಗುರೂಜಿಯೊಬ್ಬರು ಜಾಹೀರಾತು ನೀಡಿದ್ದನ್ನು ನೋಡಿದ ತೆಪರೇಸಿ, ಅವರಿಗೆ ಫೋನ್ ಮಾಡಿದ. ‘ಗುರುಗಳೇ, ನೀವು ಕೊರೊನಾ ಬಂದೋರಿಗೆ ಯಂತ್ರ ಮಾಡಿ ಕೊಡ್ತೀರೋ ಅಥ್ವಾ ಅದು ಬರದಂಗೇ ಯಂತ್ರ ಮಾಡಿಕೊಡ್ತೀರೋ?’

‘ಎರಡಕ್ಕೂ ಮಾಡಿಕೊಡ್ತೀನಿ, ನಿಮಗೆ ಯಾವುದು ಬೇಕು?’

‘ಅಲ್ಲ, ಅದು ಮಹಾಮಾರಿ ವೈರಸ್ಸು, ನಿಮ್ಮ ಮಾತು ಕೇಳುತ್ತಾ ಅಂತ...’

‘ಎಂಥೆಂಥ ಭೂತ ಪ್ರೇತ ಪಿಶಾಚಿಗಳೆಲ್ಲ ನಮ್ಮ ಮಾತು ಕೇಳ್ತಾವೆ, ಜುಜುಬಿ ವೈರಸ್ ಕೇಳಲ್ವ?’

ಹೌದಾ? ಒಂದು ಪ್ರಶ್ನೆ ‘ಕೊರೊನಾ ಗಂಡೋ ಹೆಣ್ಣೋ?’ ಗುರೂಜಿ ತಡವರಿಸುತ್ತಾ ಕೇಳಿದರು ‘ಅದೆಲ್ಲ ಯಾಕೆ?’

‘ನೀವು ಯಂತ್ರ ಮಾಡಿಕೊಡುವಾಗ ಎಡವಟ್ಟಾಗಬಾರದು ನೋಡಿ. ಗಂಡು ಕೊರೊನಾಗೆ ಯಂತ್ರ ಮಾಡಿಕೊಡೋದು, ಆಮೇಲೆ ಹೆಣ್ಣು ಕೊರೊನಾ ಕಾಟ ಕೊಡೋದು ಮಾಡಿದ್ರೆ?’

‘ನನಗೆ ಗೊತ್ತಿಲ್ಲ, ನೀವೇ ಹೇಳಿ ನೋಡೋಣ’.

‘ನನ್ನ ಪ್ರಕಾರ ಕೊರೊನಾ ಹೆಣ್ಣು...’


‘ಹೆಣ್ಣಾ? ಅದೆಂಗೆ?’

‘ಕೊರೊನಾ ಸ್ತ್ರೀ ಪಕ್ಷಪಾತಿ, ಕೊರೊನಾದಿಂದ ಈಗ ಸತ್ತಿರೋರೆಲ್ಲ ಗಂಡಸರೇ’

‘ಆಯ್ತು, ಹೆಣ್ಣು ಕೊರೊನಾಗೆ ಮಂತ್ರಿಸಿ, ದಿಗ್ಬಂಧನ ಹಾಕಿ ನಿಮಗೆ ಗಟ್ಟಿಯಂತ್ರ ಮಾಡಿಕೊಟ್ರೆ ಆಯ್ತಲ್ಲ?’ ಗುರೂಜಿ ರಾಜಿಗೆ ಬಂದರು.

‘ಆಯ್ತು ಆದರೆ ಒಂದು ಕಂಡೀಶನ್. ನಿಮ್ಮ ಅಕೌಂಟಿಗೆ ನೀವು ಹೇಳಿದಷ್ಟು ಹಣ ಹಾಕ್ತೇನೆ. ನಿಮ್ಮಿಂದ ಒಂದು ಉಪಕಾರ ಆಗಬೇಕು...’

‘ಖಂಡಿತ ಮಾಡೋಣ ಹೇಳಿ’ ಗುರೂಜಿ ಖುಷಿಯಾದರು.

‘ಏನಿಲ್ಲ, ಯಂತ್ರ ಇಸ್ಕಳೋಕೆ ನಾನು ಹೊರಕ್ಕೆ
ಬಂದ್ರೆ ಪೊಲೀಸ್ರು ಒದೀತಾರೆ. ಹೆಂಗೂ ಕೊರೊನಾ ನಿಮಗೇನೂ ಮಾಡಲ್ಲ. ಒಂದು ಹೆಜ್ಜೆ
ನೀವೇ ನಿಮ್ಮ ಕಚೇರಿ ಪಕ್ಕಾನೇ ಇರೋ ಗೌರ್ಮೆಂಟ್ ಆಸ್ಪತ್ರೆ ಕೊರೊನಾ ವಾರ್ಡ್‌ಗೆ ಹೋಗಿ ನಮ್ಮ ಪೇಶಂಟ್ ಕೈಗೆ ಆ ಯಂತ್ರ ಕಟ್ಟಿ ಬರ್ತೀರಾ?
ಹಲೋ... ಹಲೋ...’ ಗುರೂಜಿ ಫೋನ್ ಕಟ್!
-ಬಿ.ಎನ್.ಮಲ್ಲೇಶ್

ನೋಡಿ ಸ್ವಾಮಿ ಮಾಲ್ಗುಡಿಯ ಆ ದಿನಗಳು

ನೋಡಿ ಸ್ವಾಮಿ ಮಾಲ್ಗುಡಿಯ ಆ ದಿನಗಳು


ನೋಡಿ ಸ್ವಾಮಿ ಮಾಲ್ಗುಡಿಯ ಆ ದಿನಗಳು


ಮಂಜುನಾಥ್ ನಾಯ್ಕರ್

ನೀವು ಮಾಲ್ಗುಡಿ ಡೇಸ್ ನೋಡಿದ್ದೀರಾದರೆ ನನ್ನ ಪರಿಚಯ ಇದ್ದೇ ಇರುತ್ತದೆ. ಹೌದು, ನಾನು ಮಾಸ್ಟರ್ ಮಂಜುನಾಥ್. ಆ ಕಾಲದ ಬಾಲ ಕಲಾವಿದ. ನನ್ನ ಮೂರನೇ ವರ್ಷದಲ್ಲಿ ಚಿತ್ರರಂಗದ ಜತೆ ನಂಟು ಶುರುವಾಯಿತು. ಪ್ರೊಡಕ್ಷನ್ ಮ್ಯಾನೇಜರ್ ಆಗಿದ್ದ ನನ್ನ ತಂದೆಯ ಸ್ನೇಹಿತರೊಬ್ಬರು ವಾಚಾಳಿ ಹುಡುಗನ ಪಾತ್ರಕ್ಕಾಗಿ ಹುಡುಕಾಟದಲ್ಲಿದ್ದರು. ನನಗದು ಅನಾಯಾಸವಾಗಿ ಒಲಿದು ಬಂತು. ಮಾಲ್ಗುಡಿ ಡೇಸ್‌ನ ಸ್ವಾಮಿ ಪಾತ್ರ ಹಾಗೂ ಅಗ್ನಿಪಥ್‌ನ ಅಮಿತಾಭ್ ಬಚ್ಚನ್ ಅವರ ಬಾಲ್ಯದ ಪಾತ್ರ ಮಾಡುವ ಹೊತ್ತಿಗಾಗಲೇ ನಾನು 23 ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದೆ. 

ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಸರಣಿ ಚಿತ್ರಗಳನ್ನು ತಯಾರಿಸಲು ನಿರ್ಧರಿಸಲಾಗಿತ್ತು. ಆಗ ಇದ್ದಿದ್ದು ದೂರದರ್ಶನ ಮಾತ್ರ. ದಕ್ಷಿಣ ಭಾರತದ ತಂಡಕ್ಕೆ ರಾಷ್ಟ್ರೀಯ ಸರಣಿಯೊಂದನ್ನು ನೀಡುವುದು ಹೇಗೆಂಬ ಅಳುಕೂ ಅವರಲ್ಲಿತ್ತು. ಆರ್‌.ಕೆ. ನಾರಾಯಣ್ ಹಾಗೂ ಶಂಕರ್‌ನಾಗ್ ಮೊದಲಾದವರ ನಿರಂತರ ಪರಿಶ್ರಮದ ಫಲವಾಗಿ ಕನ್ನಡಿಗರೇ ಕೂಡಿದ್ದ ತಂಡ ಇಡೀ ಸರಣಿಯಲ್ಲಿ ಕೆಲಸ ಮಾಡಿತು.  

ಅದು 1987ರ ಬೇಸಿಗೆ ಸಮಯ. ನೂರಕ್ಕೂ ಹೆಚ್ಚು ಕಲಾವಿದರು ಹಾಗೂ ತಂತ್ರಜ್ಞರಿದ್ದ ನಮ್ಮ ತಂಡ ಆಗುಂಬೆಯಲ್ಲಿ ಬೀಡುಬಿಟ್ಟಿತ್ತು. ಊರಿನ ಜನರಿಗಿಂತ ನಮ್ಮ ತಂಡದ ಸಂಖ್ಯೆಯೇ ಹೆಚ್ಚಿತ್ತು. ಆ ಊರು ಅಕ್ಷರಶಃ ನನ್ನ ಮನೆಯೇ ಆಗಿಹೋಗಿತ್ತು. ಬೆಳಗ್ಗೆ 5ಕ್ಕೆ ಎದ್ದು, ಅಂಬಾಸಿಡರ್ ಕಾರು ಏರಿ, 70 ಕಿಲೋಮೀಟರ್ ದೂರದಲ್ಲಿದ್ದ ಅರಸಾಳು ರೈಲ್ವೆ ನಿಲ್ದಾಣ ತಲುಪಬೇಕಿತ್ತು. ಅಲ್ಲಿಗೆ ಬರುತ್ತಿದ್ದುದು ಎರಡು ರೈಲು ಮಾತ್ರ. ಇಂತಹ ಪರಿಸ್ಥಿತಿಯಲ್ಲಿ ಚಿತ್ರೀಕರಣ ದುಸ್ತರವೇ ಸರಿ.  

ಅಸಾಧಾರಣ ದೂರದೃಷ್ಟಿ ಹೊಂದಿದ್ದ ಶಂಕರ್‌ನಾಗ್ ಅವರಿಗೆ ಅಸಾಧ್ಯ ಎಂಬುದೇ ಗೊತ್ತಿರಲಿಲ್ಲ. ಈಗ ಕ್ರೇನ್ ಶಾಟ್ ತೆಗೆಯುವ ರೀತಿಯಲ್ಲೇ, ಅಂದು ಅಡಿಕೆ ಮರಗಳನ್ನು ಇದಕ್ಕಾಗಿ ಬಳಸಿಕೊಳ್ಳಲಾಗಿತ್ತು. ಪಕ್ಕದ ಮನೆಗಳಿಂದ ತೊಟ್ಟಿಲು ತಂದು, ಅದನ್ನು ಎರಡು ಅಡಿಕೆ ಮರಗಳ ಮಧ್ಯೆ ಕಟ್ಟಿ, ಅದರಲ್ಲಿ ಕ್ಯಾಮೆರಾಮನ್‌ ಕೂಡಿಸಿ ಚಿತ್ರೀಕರಿಸಿದ್ದು ಆಗಿನ ಕಾಲಕ್ಕೆ ಒಂದು ಸೋಜಿಗ. 

1987–90ರ ಅವಧಿಯಲ್ಲಿ ಮಾಲ್ಗುಡಿ ಡೇಸ್ 100ಕ್ಕೂ ಹೆಚ್ಚು ದೇಶಗಳಲ್ಲಿ ಪ್ರಸಾರ ಕಂಡು, ಹತ್ತಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿತು. ವೈರುಧ್ಯವೆಂದರೆ, ಬ್ರಿಟಿಷ್ ವಿರೋಧಿ ಅಂಶಗಳಿದ್ದರೂ ಚಿತ್ರವು ಲಂಡನ್‌ನಲ್ಲಿ ಅತ್ಯುತ್ತಮ ಚಿತ್ರ ಎಂಬ ಗೌರವಕ್ಕೆ ಭಾಜನವಾಯಿತು. 

ಸರ್ಕಾರದ ಅನುಮತಿ ಪಡೆದು, ಶಾಲಾ ಹಾಜರಾತಿಯಿಂದ ವಿನಾಯಿತಿ ಪಡೆದೆ. ಬಳಿಕ ನನ್ನ ಅಭಿನಯ, ಬೇಸಿಗೆ ರಜೆಗೆ ಸೀಮಿತವಾಯಿತು. ಅತ್ಯುತ್ತಮ ಪಾತ್ರಗಳ ಕೊರತೆ ಹಾಗೂ ಶಿಕ್ಷಣದ ಕಡೆಗೆ ನಾನು ಗಮನಹರಿಸಬೇಕಾದ ಕಾರಣ ನನ್ನ 16ನೇ ವಯಸ್ಸಿನಲ್ಲಿ ನಟನೆಗೆ ಇತಿಶ್ರೀ ಹೇಳಿದೆ. 

ಸ್ನಾತಕೋತ್ತರ ಪದವಿ ಬಳಿಕ ಜಾಹೀರಾತು ಏಜೆನ್ಸಿ ಕಡೆ ಗಮನಕೊಟ್ಟೆ. 10 ಮತ್ತು 12ನೇ ತರಗತಿಯ ಫಲಿತಾಂಶವನ್ನು ಆನ್‌ಲೈನ್‌ನಲ್ಲಿ ಪ್ರಕಟಿಸುವ ಆಲೋಚನೆಗೆ ಶ್ರೀಕಾರ ಹಾಕಿದೆ. ಭೂದಾಖಲೆಗಳ ಡಿಜಿಟಲೀಕರಣ ಮಾಡುವ ಭೂಮಿ ಪ್ರಾಜೆಕ್ಟ್‌ನಲ್ಲಿ ಹಾಗೂ ಬೆಂಗಳೂರು–ಮೈಸೂರು ಇನ್‌ಫ್ರಾ ಪ್ರಾಜೆಕ್ಟ್‌ನಲ್ಲಿ ಕೈಜೋಡಿಸಿದೆ. 

16 ವರ್ಷಗಳ ಬಣ್ಣದ ಹಾದಿಯಲ್ಲಿ 68 ಚಿತ್ರಗಳಲ್ಲಿ ನಟಿಸಿ, 6 ಅಂತರರಾಷ್ಟ್ರೀಯ ಪ್ರಶಸ್ತಿ, ತಲಾ ಒಂದು ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿ ಪಡೆದೆ. ಖುಷಿಯ ವಿಚಾರವೆಂದರೆ, ಈಗಲೂ ನನ್ನನ್ನು ಮಾಲ್ಗುಡಿಯ ಸ್ವಾಮಿ ಎಂದೇ ಜನ ಗುರುತಿಸುತ್ತಾರೆ.


Munjane mathu

Munjane mathu

Featured Post

ನಿದ್ದೆ ಎಂಬ ಮದ್ದು

ನಿದ್ದೆ ಎಂಬ ಮದ್ದು ‘ಹಗಲು ಎಚ್ಚರ, ರಾತ್ರಿ ಗಡದ್ದಾಗಿ ನಿದ್ದೆ ಮಾಡಿದರೆ ಕೊರೊನಾ ಸದ್ದಿರೋಲ್ವಂತೆ’ ಸುದ್ದಿಸಾರ ಹೇಳಿದೆ. ‘ಹಾಳಾದ್ದು, ಮಧ್ಯಾಹ್ನ ನಿದ್ದೆ ತಡೆಯ...

Popular Post